ಪಾಕಿಸ್ತಾನದ ಈಶಾನ್ಯದಲ್ಲಿ ರಾವಿನದಿಯ ದಕ್ಷಿಣಕ್ಕೆ ಸುಮಾರು ಒಂದುವರೆ ಕಿಮೀ ದೂರದಲ್ಲೂ ಪಾಕಿಸ್ತಾನದ ಪೂರ್ವಗಡಿಗೆ 37 ಕಿಮೀ ದೂರದಲ್ಲೂ ಇರುವ ಒಂದು ಮಹಾನಗರ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಆಡಳಿತ ಕೇಂದ್ರ. ಇದು ಭಾರತದ ಗಡಿಯ ಅಮೃತಸರಕ್ಕೆ ಹತ್ತಿರದಲ್ಲಿ, ಅದರ ದಕ್ಷಿಣಕ್ಕಿರುವ ಈ ನಗರ ಕರಾಚಿಯನ್ನು ಬಿಟ್ಟರೆ ಪಾಕಿಸ್ತಾನದ ಎರಡನೆಯ ಮಹಾನಗರ. ಜನಸಂಖ್ಯೆ 29,52,689.

ಪಾಕಿಸ್ತಾನದ ವಿದ್ಯಾಕೇಂದ್ರ. ಸರ್ಕಾರಿ ಕಾಲೇಜು, 1864ರಲ್ಲಿ ಸ್ಥಾಪಿಸಿದ ಫೋರ್‍ಮ್ಯಾನ್ ಕ್ರಿಶ್ಚಿಯನ್ ಕಾಲೇಜು(1864), ಮಹಿಳೆಯರ ಕಿನ್ನರೆಡ್ ಕಾಲೇಜು(1950), ಕಿಂಗ್ ಎಡ್ವರ್ಡ್ ಮೆಡಿಕಲ್ ಕಾಲೇಜು(1970), ನ್ಯಾಷನಲ್ ಕಾಲೇಜ್ ಆಫ್ ಆಟ್ರ್ಸ್, ಲಾಹೋರ್ ವಿಶ್ವವಿದ್ಯಾಲಯ ಮುಂತಾದವು ಈ ನಗರದ ಕೀರ್ತಿಯನ್ನು ಹೆಚ್ಚಿಸಿವೆ.ಬಹು ಪುರಾತನವಾದ ಈ ನಗರ ರಾಮನ ಮಗ ಲವ ಸ್ಥಾಪಿಸಿದ್ದೆಂದೂ ಲೊಹ-ಅವಾರ್ ಎಂಬುದರಿಂದ ಲಾಹೋರ್ ಶಬ್ದ ವ್ಯುತ್ಪನ್ನವಾಗಿದೆ ಎಂದೂ ಹೇಳಲಾಗಿದೆ. ಲಾಹೋರ್ ಎಂದರೆ ಕಬ್ಬಿಣದಷ್ಟು ಗಟ್ಟಿಯಾದ ಕೋಟೆ ಎಂದರ್ಥ. 1206ರಲ್ಲಿ ಕುತುಬ್-ಉದ್-ದಿನ್ ಐಬಕ್ ಈ ನಗರದಲ್ಲಿ ಕಿರೀಟಧಾರಣೆ ಮಾಡಿಕೊಂಡು ಅಂದಿನಿಂದ ಸುಲ್ತಾನರ ಆಳಿಕೆಗೆ ದಾರಿಮಾಡಿ ಕೊಟ್ಟನೆನ್ನುವರು. 1584-1598ರವರೆಗೆ 14 ವರ್ಷಗಳ ಕಾಲ ಇದು ಅಕ್ಬರ್‍ನ ರಾಜಧಾನಿಯಾಗಿತ್ತು. ಅಕ್ಬರ್ 12 ದ್ವಾರಗಳುಳ್ಳ ಕೋಟೆಯನ್ನು ಕಟ್ಟಿಸಿದ್ದ. ಜಹಾಂಗೀರ್ ಮತ್ತು ಷಹಜಹಾನ್ ಜನಿಸಿದ್ದು ಇದೇ ನಗರದಲ್ಲಿ. ಜಹಾಂಗೀರ್ ಮತ್ತು ನೂರ್‍ಜಹಾನಳ ಗೋರಿ ಇಲ್ಲಿಯ ಷಹದಾರ ಎಂಬಲ್ಲಿದೆ. ಔರಂಗಜೇಬ್(1658-1707) ಲಾಹೋರಿನಲ್ಲಿ ಬಹು ಪ್ರಸಿದ್ಧವಾದ ಬಾದಷಾಹಿ ಮಸೀದಿ ಕಟ್ಟಿಸಿ ಆಲಂಗೀರ್ ಕೋಟೆ ಮಾರ್ಗ ನಿರ್ಮಿಸಿದ. 1799ರಲ್ಲಿ ರಣಜಿತ್‍ಸಿಂಗ್ ಲಾಹೋರನ್ನು ಗೆದ್ದುಕೊಂಡ. ಮೊಗಲರ ಕಾಲದ ಕೆಲವು ಪ್ರಸಿದ್ಧ ಕಟ್ಟಡಗಳ ಜೊತೆಗೆ ಬ್ರಿಟಿಷರು ಬಂದು ಇಲ್ಲಿ ನೆಲಸಿ ದೊಡ್ಡ ಕಟ್ಟಡಗಳನ್ನು ಬಂಗಲೆಗಳನ್ನೂ ಉದ್ಯಾನವನಗಳನ್ನೂ ಉತ್ತಮ ರಸ್ತೆಗಳನ್ನೂ ಸೈನಿಕರ ಬಿಡಾರಗಳನ್ನೂ ನಿರ್ಮಿಸಿದರು. ಲಾಹೋರ್ ಇಂದು ಒಂದು ದೊಡ್ಡ ಕೈಗಾರಿಕಾ ಕೇಂದ್ರವಾಗಿದೆ. “ನನ್ನ ಜೀವನ ತೆತ್ತು ನಾನು ಲಾಹೋರನ್ನು ಕೊಂಡುಕೊಂಡೆ, ಅಂದರೆ ನಿಜವಾಗಿ ನಾನು ಮತ್ತೊಂದು ಸ್ವರ್ಗವನ್ನು ಕೊಂಡುಕೊಂಡೆ” ಎಂದು ಲಾಹೋರನ್ನು ಕುರಿತಂತೆ ನೂರ್‍ಜಹಾನ್ ಹೇಳಿರುವ ಈ ಮಾತುಗಳು ಈ ನಗರದ ಪ್ರತಿಷ್ಠೆಯನ್ನು ಸೂಚಿಸುತ್ತವೆ.

ಲಾಹೋರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಬಹು ಮುಖ್ಯವಾದವು: ಅಕ್ಬರ್ ಕಟ್ಟಿಸಿರುವ ಲಾಹೋರಿನ ಕೋಟೆ, ಷಾಜಹಾನ್ ಕಟ್ಟಿಸಿದ ಮೋತಿಮಸೀದಿ, ಅಕ್ಬರ್ ನಿರ್ಮಿಸಿದ ದಿವಾನ್-ಇ-ಖಾಸ್, ಕ್ವಭಾಗ್-ಇ-ಜಹಾಂಗೀರ್ (ಜಹಾಂಗೀರನ ಕನಸಿನ ಮನೆ) ಇಂದು ವಸ್ತು ಸಂಗ್ರಹಾಲಯವಾಗಿದೆ ಈ ವಸ್ತುಪ್ರದರ್ಶನಾಲಯದಲ್ಲಿ ದಂತದ ತಾಜ್ ಮಹಲಿನ ದೊಡ್ಡ ಪ್ರತಿಕೃತಿ ಮತ್ತು ಅಕ್ಬರ್‍ನ ಪ್ರಸಿದ್ಧ ಅಕ್ಬರ್‍ನಾಮ ಮೂಲಕೃತಿಗಳಿವೆ. 1634ರಲ್ಲಿ ಕಟ್ಟಿದ ಸುಂದರವಾದದ್ದೆಂದು ಪ್ರಸಿದ್ಧವಾಗಿರುವ ವಾಜಿûದ್ ಖಾನ್ ಮಸೀದಿ ಇಲ್ಲಿದೆ. ಬಾಬರನ ಬರೆಹದ ಪ್ರಕಾರ ಇಲ್ಲಿರುವ ಶಾಲಿಮಾರ್ ಉದ್ಯಾನವನ “ಬಹುಶುದ್ಧವಾದ ಮಾನವ ಸಂತೋಷ”ದ ಪ್ರತಿರೂಪ ಇಲ್ಲಿ ಚಕ್ರವರ್ತಿಯ ಮಲಗುವ ಮನೆ, ಸಾರ್ವಜನಿಕ ಸಂದರ್ಶನ ಸಭಾಂಗಣ ಇತ್ಯಾದಿಗಳಿವೆ. ಲಾಹೋರಿಗೆ 13 ದ್ವಾರಗಳಿದ್ದು ಪ್ರತಿಯೊಂದಕ್ಕೂ ಒಂದೊಂದು ಹೆಸರಿದೆ.

ಲಾಹೋರ್ ಇಂದು ಬೃಹತ್ ನಗರವಾಗಿ ಬೆಳೆಯುತ್ತಿದೆ. ಪರಂಪರೆಯ ಕಟ್ಟಡಗಳ ಜಾಗದಲ್ಲಿ ಕಾಂಕ್ರೀಟ್ ಕಟ್ಟಡಗಳು ಬೃಹತ್ತಾಗಿ ನಿರ್ಮಾಣ ವಾಗುತ್ತಿವೆ. ಹೊಸ ನಿರ್ಮಾಣಗಳಲ್ಲಿ ಮಿನಾರ್-ಇ-ಪಾಕಿಸ್ತಾನ್, ಇಕ್ಬಾಲ್ ಉದ್ಯಾನವನ, ಹಜೂರಿಬಾಗ್, ವಾಪ್ಡ ಹೌಸ್, ಪಂಜಾಬ್ ಅಸೆಂಬ್ಲಿಹಾಲ್, ಸಮ್ಮಿತ್‍ನಾರ್, ಜಲ್ಲೊರಾಷ್ಟ್ರೀಯ ಉದ್ಯಾನವನ, ರೇಸ್‍ಕೋರ್ಸ್ ಪಾರ್ಕ್, ಲಿಬರ್ಟಿ ಮಾರ್ಕೆಟ್, ಇಚ್ರಾ ಮತ್ತು ಮೊಜಾಂಗ್ ಮಾರ್ಕೆಟ್, ಆಧುನಿಕ ಶಾಪಿಂಗ್ ಸಂಕೀರ್ಣಗಳು, ವ್ಯಾಪಾರ ಕೇಂದ್ರಗಳು ಗಮನಸೆಳೆಯುತ್ತವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ